ನಿರಂತರ ಯೋಗಾಭ್ಯಾಸದಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿ-ಬಿ ಎಸ್ ಪಾಟೀಲ
ನಿರಂತರ ಯೋಗಾಭ್ಯಾಸದಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿ-ಬಿ ಎಸ್ ಪಾಟೀಲ
ಇಂಡಿ: ಯೋಗವು ಮಕ್ಕಳಲ್ಲಿ ಮಾನಸಿಕ, ಆಧ್ಯಾತ್ಮಿಕ, ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಬೆಳೆಸಿ,
ಸಕಾರಾತ್ಮಕ ಆರೋಗ್ಯಕರ ಜೀವನವನ್ನು ಉತ್ತೇಜಿಸುತ್ತದೆ ಎಂದು ಯೋಗ ಶಿಕ್ಷಕ ಬಿ ಎಸ್ ಪಾಟೀಲ ಹೇಳಿದರು.
ಶನಿವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯ ವತಿಯಿಂದ ಹಮ್ಮಿಕೊಂಡ 'ಅಂಗೈಯಲ್ಲಿ ಆರೋಗ್ಯ-ಯೋಗ ಕಾರ್ಯಕ್ರಮ' ಉದ್ಘಾಟಿಸಿ ಮಾತನಾಡಿದರು.
ನಿರಂತರ ಯೋಗಾಭ್ಯಾಸವು ಮಕ್ಕಳಲ್ಲಿ ಆತ್ಮವಿಶ್ವಾಸ, ಉತ್ತಮ ಸಂವಹನ, ತಂಡ ಮನೋಭಾವದ ಮೌಲ್ಯಗಳನ್ನು ಹೆಚ್ಚಿಸುತ್ತದೆ. ಯೋಗದಿಂದ ರೋಗ ನಿರೋಧಕ ಶಕ್ತಿ ಕೂಡ ಬಲಗೊಳ್ಳುತ್ತದೆ ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಯೋಗ ಪದ್ಧತಿ ಭಾರತದ ಆಸ್ತಿ, ಭಾರತವು ವಿಶ್ವಕ್ಕೆ ಯೋಗದ ಮೂಲಕ ಶಾಂತಿಯನ್ನು ರಫ್ತು ಮಾಡಿದೆ. ಯೋಗದಿಂದ ಮಕ್ಕಳಲ್ಲಿ ಶಕ್ತಿ, ಸಹಿಷ್ಣುತೆ, ಆತ್ಮವಿಶ್ವಾಸ ಬೆಳೆಯುತ್ತದೆ. ಜತೆಗೆ ಮಕ್ಕಳಿಗೆ ಶಿಸ್ತುಬದ್ಧ ಜೀವನ ರೂಢಿಸುತ್ತದೆ ಎಂದು ಹೇಳಿದರು.
ಶಿಕ್ಷಕ ಎಸ್ ಆರ್ ಚಾಳೇಕರ ಮಾತನಾಡಿ, ಆಧುನಿಕ ಜೀವನ ಪದ್ಧತಿಯಲ್ಲಿ ಒತ್ತಡ ಹಾಗೂ ಆಹಾರ ಪದ್ಧತಿಯಿಂದಾಗಿ ದೇಹ ಸದೃಢವಾಗಿರಲು ಸಾಧ್ಯವಾಗುತ್ತಿಲ್ಲ. ಪೂರ್ಣ ಆಯಸ್ಸು ಪಡೆಯಬೇಕಾದರೆ ಯೋಗಕ್ಕೆ ಆಧ್ಯತೆ ನೀಡಬೇಕು ಎಂದು ತಿಳಿಸಿದರು.
ಕೆಬಿಎಸ್ ಎಸ್ ಡಿ ಎಂ ಸಿ ಅಧ್ಯಕ್ಷ ಮಾಳಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಮೇಶ ಮಠಪತಿ, ಸದಸ್ಯ ರಾಜಶೇಖರ ಗುಡಿ, ಮುಖ್ಯ ಶಿಕ್ಷಕರಾದ ಅನಿಲ ಪತಂಗಿ, ವ್ಹಿ ವೈ ಪತ್ತಾರ ಹಾಗೂ ಶಿಕ್ಷಕರಾದ ಎಸ್ ಎಂ ಪಂಚಮುಖಿ, ಶಾಂತೇಶ ಹಳಗುಣಕಿ, ಜೆ ಸಿ ಗುಣಕಿ, ಎಸ್ ಎನ್ ಡಂಗಿ, ಸಾವಿತ್ರಿ ಸಂಗಮದ, ಎಫ್ ಎ ಹೊರ್ತಿ, ಎಸ್ ವ್ಹಿ ಬೆನೂರ, ಎಸ್ ಬಿ ಕುಲಕರ್ಣಿ, ಎಸ್ ಡಿ ಬಿರಾದಾರ, ಸುಮಿತ್ರಾ ನಂದಗೊಂಡ, ಸುರೇಶ ದೊಡ್ಯಾಳಕರ, ಶೃದ್ಧಾ ಬಂಕಲಗಾ, ಬಿ ಎಸ್ ಹೊಸೂರ, ಪ್ರಜ್ವಲ್ ಕುಲಕರ್ಣಿ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ವಿವಿಧ ಯೋಗಾಸನಗಳನ್ನು ಮಾಡಿಸಲಾಯಿತು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ