ಸ್ವ ಪಕ್ಷದ ಸದಸ್ಯರೇ ಅಧ್ಯಕ್ಷರಿಗೆ ತರಾಟೆಗೆ ತೆಗೆದುಕೊಂಡು ನಿಮ್ಮ ಕೈಲಾಗದಿದ್ದರೆ ಖುರ್ಚಿಯಿಂದ ಇಳಿಯಿರಿ ಎಂದು ಆಕ್ರೋಶ ಹೊರಹಾಕಿದ ಘಟನೆ ಪಟ್ಟಣದ ಪುರಸಭೆಯಲ್ಲಿ ನಡೆಯಿತು.
ಇಂಡಿ: ಸ್ವ ಪಕ್ಷದ ಸದಸ್ಯರೇ ಅಧ್ಯಕ್ಷರಿಗೆ ತರಾಟೆಗೆ ತೆಗೆದುಕೊಂಡು ನಿಮ್ಮ ಕೈಲಾಗದಿದ್ದರೆ ಖುರ್ಚಿಯಿಂದ ಇಳಿಯಿರಿ ಎಂದು ಆಕ್ರೋಶ ಹೊರಹಾಕಿದ ಘಟನೆ ಪಟ್ಟಣದ ಪುರಸಭೆಯಲ್ಲಿ ನಡೆಯಿತು.
ಗುರುವಾರ ಪುರಸಭೆಯ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಬಹುತೇಕ ಸದಸ್ಯರು ಕಳೆದ ಆರು ತಿಂಗಳಿಗಿನಿಂದ ಪಟ್ಟಣದಲ್ಲಿ ಪುರಸಭೆಯಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿಲ್ಲ, ಯಾವೊಬ್ಬ ಸದಸ್ಯರಿಗೂ ಅಧ್ಯಕ್ಷರು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ ಎಂದು ಸ್ವಪಕ್ಷದ ಹಾಗೂ ವಿರೋಧ ಪಕ್ಷದ ಸದಸ್ಯರು ಅಧ್ಯಕ್ಷ ಲಿಂಬಾಜಿ ರಾಠೋಡ ವಿರುದ್ಧ ಅಸಮಾಧಾನ ಹೊರಹಾಕಿದರು.
ಸದಸ್ಯರಾದ ಅನೀಲಗೌಡ ಬಿರಾದಾರ, ಉಮೇಶ ದೇಗಿನಾಳ ಮಾತನಾಡಿ, ವಾರ್ಡ್ ಗಳಲ್ಲಿ ವಿದ್ಯುತ್ ಕಂಬಗಳಿಗೆ ನಾಲ್ಕು ತಿಂಗಳಿನಿಂದ ವಿದ್ಯುತ್ ಬಲ್ಬ್ ಅಳವಡಿಸಿಲ್ಲ, ಬಲ್ಬ ಹಾಕದಷ್ಟೂ ಅನುದಾನವಿಲ್ಲವೇ ಎಂದು ಮುಖ್ಯಾಧಿಕಾರಿ, ಅಧ್ಯಕ್ಷರ ವಿರುಧ್ಧ ಗುಡುಗಿದರು.ಟೆಂಡರ್ ದಾರರಿಗೆ ಹೇಳಿದರೆ ಮುಖ್ಯಾಧಿಕಾರಿಗಳಿಗೆ ಹೇಳಿ ಎನ್ನುತ್ತಾರೆ. ಸದಸ್ಯರು ಎಂದರೆ ಕಿಮ್ಮತ್ತು ಇರದಂತಾಗಿದೆ, ಪಟ್ಟಣದ ೧೩ ಮತ್ತು ೧೯ನೇ ವಾರ್ಡಗಳು ಅತಿ ದೊಡ್ಡ ವಾರ್ಡುಗಳಾಗಿವೆ. ಆ ವಾರ್ಡಿನಲ್ಲಿ ರಸ್ತೆಗಳೆಲ್ಲ ಹದಗೆಟ್ಟಿವೆ, ಒಂದು ವಾರ್ಡಿಗೆ ರಸ್ತೆಗಳಲ್ಲಿನ ಗುಂಡಿ ತುಂಬಲು ಕೇವಲ ಮೂರು ಲಾರಿ ಗರಸು ನೀಡಿದರೆ ಹೇಗೆ? ದೊಡ್ಡವಾರ್ಡಿಗೆ ಹೆಚ್ಚಿನ ಗರಸು ನೀಡಬೇಕು, ರಸ್ತೆ ಹದಗೆಟ್ಟಿದ್ದನ್ನು ನಾವು ತೋರಿಸುತ್ತೇವೆ ಮುಖ್ಯ ಅಧಿಕಾರಿಗಳೇ ನೇರವಾಗಿ ಮುಂದೆ ನಿಂತು ಗರಸು ಹಾಕಿ ಎಂದು ಆಗ್ರಹಿಸಿದರು.
ಮುಖ್ಯ ಅಧಿಕಾರಿ ಸಿದ್ರಾಯ ಕಟ್ಟಿಮನಿ ಹಾಗೂ ಅಧ್ಯಕ್ಷ ಲಿಂಬಾಜಿ ರಾಠೋಡ್ ಅವಶ್ಯಕತೆ ಇದ್ದಲ್ಲಿ ಹೆಚ್ಚಿನ ಗರಸು ನೀಡುತ್ತೇವೆ ಎಂದು ಸಮಾಧಾನಪಡಿಸಿದರು.
ಸದಸ್ಯ ಇಸ್ಮಾಯಿಲ್ ಅರಬ್ ಮಾತನಾಡಿ, ಪಟ್ಟಣದ ಹನ್ನೊಂದನೇ ವಾರ್ಡಿನಲ್ಲಿ ಇರುವ ಗಾರ್ಡನ್ ಸ್ಥಳದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಲಾಗಿದ್ದು, ಅಲ್ಲಿನ ಸಾರ್ವಜನಿಕರು ಕಳೆದ ಆರು ತಿಂಗಳ ಹಿಂದೆಯೇ ಅದನ್ನು ಕೆಡವಿ ಗಾರ್ಡನ್ ಮಾಡಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದರು ಸಹಿತ ಪುರಸಭೆ ಸಿಬ್ಬಂದಿಗಳು ಇದುವರೆಗೂ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಮುಂದಾಗಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಇದಕ್ಕೆ ಉತ್ತರಿಸಿದ ಮುಖ್ಯ ಅಧಿಕಾರಿಗಳು ಒಂದು ವಾರದಲ್ಲಿ ಆ ಕಟ್ಟಡವನ್ನು ನೆಲಸಮ ಮಾಡುವುದಾಗಿ ತಿಳಿಸಿದರು.
ಸದಸ್ಯ ಅನಿಲ್‌ಗೌಡ ಬಿರಾದಾರ, ಇಸ್ಮಾಯಿಲ್ ಅರಬ, ಶಬ್ಬೀರ ಖಾಜಿ, ದೇವೆಂದ್ರ ಕುಂಬಾರ ಮಾತನಾಡಿ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಜಮಾ ಕರ್ಚು ಲೆಕ್ಕಗಳನ್ನು ನೀಡಿಲ್ಲ, ಏಕೆ ಎಂದು ಪ್ರಶ್ನಿಸಿ ಎಷ್ಟು ಕಾಮಗಾರಿ ಮಾಡಿದ್ದೀರಿ ಎಷ್ಟು ಬಿಲ್ ನೀಡಿದ್ದೀರಿ ಅದರಲ್ಲಿ ನೀವೆಷ್ಟು ಪಡೆದಿದ್ದೀರಿ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು. ಅಲ್ಲದೆ ಕೆಇಬಿ ಅವರು ನಗರದಲ್ಲಿನ ವಿದ್ಯುತ್ ಹಳೆಯ ತಂತಿಗಳನ್ನು ತೆಗೆದು ಹೊಸ ತಂತಿ ಹಾಕಬೇಕು ಎಂದರು. ಅಲ್ಲದೆ ಡ್ರೆöÊನೇಜ ಸ್ವಚ್ಛತೆಗಾಗಿ ೭ ಲಕ್ಷ ವೆಚ್ಚದಲ್ಲಿ ಮಸೀನು ಖರೀದಿ ಮಾಡಿದ್ದು ಅದು ಬಳಕೆ ಮಾಡದೆ ಹಾಗೆ ಬಿಟ್ಟಿದ್ದರಿಂದ ತುಕ್ಕು ಹಿಡಿದು ನಿಂತಿದೆ. ಆದರೆ ೬೦ ಲಕ್ಷ ರೂ ವೆಚ್ಚದಲ್ಲಿ ಜೆಟ್ಟಿಂಗ ಮಸೀನು ಖರಿದಿಸಲು ಕಳೆದ ಐದು ವರ್ಷದಿಂದ ಚರ್ಚೆ ನಡೆಯುತ್ತಿದ್ದು ಇನ್ನೂವರೆÀಗೆ ಖರಿದಿಸುತ್ತಿಲ್ಲ ಎಂದು ಸದಸ್ಯ ಖಾಜಿ ಹಾಗೂ ಅನೀಲಗೌಡ ಯಾಕೆ ಎಂದು ಕೇಳಿದರು.
ನೂತನ ನಲ್ಲಿ ಸಂಪರ್ಕ ತೆಗೆದುಕೊಳ್ಳಬೇಕಾದರೆ ಸುಮಾರು ೫೦ ಸಾವೀರ ಕಟ್ಟಬೇಕು. ಅಷ್ಟೊಂದು ಪ್ರಮಾಣದ ಹಣ ಬಡವರಿಂದ ಕಟ್ಟಲು ಸಾಧ್ಯವಿಲ್ಲ ಇದನ್ನು ಕಡಿಮೆ ಮಾಡಬೇಕು ಎಂದು ಖಾಜಿ ಒತ್ತಾಯಿಸಿದರು. ಸದಸ್ಯ ಇಸ್ಮಾಯಿಲ್ ಅರಬ ನಗರೋತ್ಥಾನ ಕೆಲಸ ಕಾಮಗಾರಿಗಳು ನಡೆಯುತ್ತಿಲ್ಲ ಎಂದರು.
ಪ್ರತಿಕ್ರಿಸಿದ ಮುಖ್ಯ ಅಧಿಕಾರಿ ಕಟ್ಟಿಮನಿ ಎಲ್ಲಾ ಸದಸ್ಯರಿಗೆ ತದನಂತರ ಜಮಾ ಖರ್ಚು ನೀಡಲಾಗುವುದು. ನಾನು ಬಂದು ಬಹಳ ದಿನ ಆಗಿಲ್ಲ. ಹೀಗಾಗಿ ನಾನು ಎಲ್ಲ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿಗಳನ್ನು ಮಾಡಿಸುತ್ತೇನೆ ಎಂದು ತಿಳಿಸಿ ಸದಸ್ಯರನ್ನು ಸಮಾಧಾನಪಡಿಸಿದರು.
ಪಟ್ಟಣದ ಏಳು ವಾರ್ಡಗಳನ್ನು ಸ್ಲಂ ಏರಿಯಾ ಎಂದು ಗುರುತಿಸಿದ್ದು, ಅವರಿಗೆ ಪುರಸಭೆಯಿಂದ ನಿವೇಶನ ನೀಡಿ ಸರಕಾರದಿಂದ ಹಕ್ಕುಪತ್ರ ನೀಡಿದೆ. ಆದರೆ ಈಗ ಸ್ಲಂ ಏರಿಯಾವನ್ನು ಮೋಜನಿ ಮಾಡಿಸಿ ನೋಂದಣಿ ಮಾಡಿ ಎಂದು ಸ್ಲಂ ಬೋರ್ಡನವರು ಹೇಳುತ್ತಿದ್ದೀರಿ, ಆ ಹಕ್ಕುಪತ್ರ ಪಡೆದ ಬಡ ಜನಾಂಗಕ್ಕೆ ಅದು ಹೇಗೆ ಸಾಧ್ಯವಾಗುತ್ತದೆ. ಈಗಾಗಲೆ ಹಕ್ಕು ಪತ್ರ ನೀಡಿದ್ದು ಅವರ ಹೆಸರಿಗೆ ನೋಂದಣಿ ಮಾಡಿಕೊಡಬೇಕು ಎಂದು ಸದಸ್ಯರಾದ ಅಸ್ಲಂ ಕಡಣಿ, ದೇವೆಂದ್ರ ಕುಂಬಾರ, ಆಗ್ರಹಿಸಿದರು.
ಸಭೆಯಲ್ಲಿ ಭೀಮನಗೌಡ ಪಾಟೀಲ, ಮುಸ್ತಾಕ ಇಂಡೀಕರ್, ವಿಜು ಮೂರಮನ್, ಶಬ್ಬೀರ ಖಾಜಿ, ಸ್ಥಾಯಿ ಸಮೀತಿ ಅಧ್ಯೆಕ್ಷೆ ಸಂಗೀತಾ ಕರಿಕಟ್ಟಿ, ಸೈಪನ್ ಪವಾರ, ಬನ್ನೆಮ್ಮ ಹದರಿ, ರೇಖಾ ಮೂರಮನ್, ಶೈಲಜಾ ಪೂಜಾರಿ, ಕವಿತಾ ರಾಠೋಡ, ಜ್ಯೋತಿ ರಾಠೋಡ ಇದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ